ವಿಜ್ಞಾನ 1

ನೈಸರ್ಗಿಕ ವಿದ್ಯಮಾನಗಳ ತಳದಲ್ಲಿ ನಿಹಿತವಾಗಿದೆಯೆಂದು ಮಾನವಮತಿ ಅನುಭವದಿಂದ ಅಂಗೀಕರಿಸಿರುವ ಕಾರ್ಯ-ಕಾರಣ ಸಂಬಂಧವನ್ನು (ಕಾಸ್-ಎಫೆಕ್ಟ್ ರಿಲೇಷನ್) ಆತನ ಚಿಕಿತ್ಸಕ ಬುದ್ಧಿ ತಾರ್ಕಿಕವಾಗಿ ಶೋಧಿಸುತ್ತಿರುವಾಗ ಆತನಲ್ಲಿ ಮೂಡುವ ಅರಿವು (ಸೈನ್ಸ್). ಬೆರಗು, ಕುತೂಹಲ, ಪ್ರಶ್ನೆ ಮುಂತಾದವು ಈ ಶೋಧನೆಯ ಒರತೆಗಳು. ತೊಟ್ಟು ತುಂಡಾದ ಹಣ್ಣು ಮರದಿಂದ ಕೆಳಕ್ಕೆ ಕೆಡೆಯುತ್ತದೆ, ರಟ್ಟೆತ್ರಾಣವನ್ನು ಅವಲಂಬಿಸಿದ ವಿನಾ ಕಲ್ಲನ್ನು ಮೇಲಕ್ಕೆಸೆಯಲಾಗುವುದಿಲ್ಲ, ನೀರು ಸದಾ ಎತ್ತರದಿಂದ ತಗ್ಗಿಗೆ ಹರಿಯುವುದೇ ಹೊರತು ಎದುರು ದಿಶೆಯಲ್ಲಿ ಅಲ್ಲ ಮುಂತಾದ ಅನುಭವಜನ್ಯ ನಿಯಮಗಳನ್ನು ಆದಿಮಾನವ ಕಂಡುಕೊಂಡಾಗ ವಿಜ್ಞಾನ ಜನಿಸಿತು. ಇವನ್ನು ಬಳಸಿಕೊಂಡು ತನ್ನ ಬದುಕಿಗೆ ಸೌಕರ್ಯಗಳನ್ನು ರೂಪಿಸಿಕೊಂಡಾಗ ತಂತ್ರವಿದ್ಯೆ (ಟೆಕ್ನಾಲಜಿ) ಮೈದಳೆಯಿತು ಎನ್ನಬಹುದು.

	ನಿಸರ್ಗದಲ್ಲಿ ಕಾರಣರಹಿತ ಕಾರ್ಯವಿಲ್ಲ, ಅಂತೆಯೇ, ಕಾರ್ಯರಹಿತ ಕಾರಣವಿಲ್ಲ ಎಂಬ ಮೂಲಭೂತ ತತ್ವ ಕ್ರಮೇಣ ಆತನ ಅರಿವಿಗೆ ಬಂತು. ಕಾರ್ಯ ಅಥವಾ ಪರಿಣಾಮ ಗೋಚರವಾದಾಗ ಅದರ ಹಿನ್ನೆಲೆಯ ಕಾರಣದ ಶೋಧನೆಗೆ, ಅಂತೆಯೇ ಕಾರಣ ತಿಳಿದಿರುವಾಗ ಅಥವಾ ಅದನ್ನು ಊಹಿಸಿದಾಗ ಅದರ ಪರಿಣಾಮದ ಶೋಧನೆಗೆ ಮಾನವ ಮುಂದಾದ. ಆಗ ವಿಜ್ಞಾನ ಮತ್ತು ತಂತ್ರವಿದ್ಯೆಗಳ ವಿಕಾಸಕ್ಕೆ ಹೊಸ ಆಯಾಮ ಲಭಿಸಿತು. ಘರ್ಷಣೆಯಿಂದ ಶಾಖ, ಶಾಖದಿಂದ ಬೆಂಕಿ, ಬೆಂಕಿಯಿಂದ ಅಧಿಕ ಜೀವನಸೌಕರ್ಯ ಎಂಬ ತಿಳಿವಳಿಕೆ ಮೂಡಿತು, ಮತ್ತು ವಿಜ್ಞಾನದ ಮುನ್ನಡೆಗೆ ತೀವ್ರ ಗತಿ ಒದಗಿತು. ಇದರ ಫಲವಾಗಿ ಕೃಷಿಕ್ರಾಂತಿ ಸಂಭವಿಸಿತು. ಹೀಗೆ ಅಲೆಮಾರಿಯಾಗಿದ್ದ ಬೇಟೆಗಾರ-ಮಾನವ ಒಂದೆಡೆ ನೆಲಸಿ ಅಶನ, ವಸನ ಮತ್ತು ವಸತಿ ಎಂಬ ಮೂರು ಮೂಲಭೂತ ಜೀವನಾವಶ್ಯಕತೆಗಳನ್ನು ಪಡೆದುಕೊಳ್ಳುವ ತಂತ್ರಗಳನ್ನು ಸಿದ್ಧಿಸಿಕೊಂಡ. ಇತಿಹಾಸಪೂರ್ವ ದಿನಗಳಲ್ಲೇ ಇವೆಲ್ಲ ಸಂಗತಿಗಳು ಆತನ ಅರಿವಿಗೆ ಬಂದುವು. (ನೋಡಿ- ನಾಗರಿಕತೆ-ಮತ್ತು-ಸಂಸ್ಕøತಿ)

ಯಾವುದೇ ಕ್ಷೇತ್ರದಲ್ಲಿ ಸಂಶೋಧನೆಯನ್ನು ಆರಂಭಿಸುವ ಮೊದಲು ಕೆಲವು ಮೂಲಭೂತ ಅಂಶಗಳನ್ನು ಅಂಗೀಕರಿಸಬೇಕಾಗುತ್ತದೆ. ಇಲ್ಲವಾದರೆ ಮುನ್ನಡೆಗೆ ಹಾದಿಯೇ ಹೊಳೆಯದು. ಇವುಗಳಿಗೆ ಆದ್ಯುಕ್ತಿಗಳು (ಏಕ್ಸಿಯಮ್ಸ್) ಅಥವಾ ಆಧಾರಭಾವನೆಗಳೆಂದು ಹೆಸರು. ಇವು ಉದ್ದೇಶಿತ ಸೌಧಕ್ಕಾಗಿ ಬಳಸುವ ಇಟ್ಟಿಗೆ, ಗಾರೆ ಮುಂತಾದ ಅನಿವಾರ್ಯ ಅಗತ್ಯಗಳು. ಆದ್ಯುಕ್ತಿಗಳು ಎಷ್ಟು ಕನಿಷ್ಠ ಸಂಖ್ಯೆಯಲ್ಲಿರುವುವೋ ಸೌಧ ಅಷ್ಟು ಬಲಿಷ್ಠವಾಗಿರುತ್ತದೆ. ವಿಜ್ಞಾನಸೌಧದ ಆದ್ಯುಕ್ತಿಗಳಿವು:

ನಿಸರ್ಗದಲ್ಲಿ ಕ್ರಮವಿದೆ (ಆರ್ಡರ್).
ಈ ಕ್ರಮವನ್ನು ಗುರುತಿಸಿ ವಿವರಿಸುವ ಸಾಮಥ್ರ್ಯ ಮಾನವಮತಿಗಿದೆ.
ನಿಸರ್ಗವೆಂದೂ ಮಾನವನ ಜೊತೆ ಕಪಟ ದ್ಯೂತವಾಡುವುದಿಲ್ಲ.

ಮೂರನೆಯದಕ್ಕೆ ವಿವರಣೆ: ವಿಜ್ಞಾನವೆಂಬುದೊಂದು ಕ್ರೀಡೆ, ಇಲ್ಲಿಯ ಪಟುಗಳು ಮಾನವ ಮತ್ತು ನಿಸರ್ಗ. ಈ ಆಟದಲ್ಲಿ ನಿಸರ್ಗ ಪೂರ್ತಿ ನಿರ್ಲಿಪ್ತವಾಗಿ ಅದರ ನಿಯಮಾನುಸಾರವೇ ಸದಾ ವರ್ತಿಸುತ್ತದೆ, ಎಂದೂ ಎಲ್ಲಿಯೂ ಪಕ್ಷಪಾತ ನೀತಿಯನ್ನು ಪ್ರಕಟಿಸದು. ಅರ್ಥಾತ್ ಮುಪ್ಪಿನ ಷಡಕ್ಷರಿ ನುಡಿದಿರುವಂತೆ, “ಅವರವರ ದರುಶನಕೆ ಅವರವರ ವೇಷದಲಿ ಅವರವರಿಗೆಲ್ಲ ಗುರು ನೀನೊಬ್ಬನೇ.” ಇಲ್ಲಿ ಗುರು ಎಂದರೆ ನಿಸರ್ಗ ಎಂದು ಅರ್ಥವಿಸಬೇಕು. ಈ ಮಾನವ-ನಿಸರ್ಗ ಕ್ರೀಡೆಯಲ್ಲಿ ಆತನ ಸಾಮಥ್ರ್ಯ, ಪ್ರಯತ್ನ, ಪ್ರತಿಭೆ, ಸಾಧನೆ ಮುಂತಾದವನ್ನು ಅವಲಂಬಿಸಿ ನಿಸರ್ಗದ ಕೆಲವು ನಿಯಮ ಅಥವಾ ರಹಸ್ಯಗಳನ್ನು ಆತ ತುಸುತುಸುವೇ ಗ್ರಹಿಸಬಹುದು. ಇಂಥ ಅರಿವಿನ ಮೊತ್ತವೇ ವಿಜ್ಞಾನ.

ನಿಸರ್ಗದ ರಹಸ್ಯವನ್ನು ಶೋಧಿಸುವ ಈ ನಡೆಯಲ್ಲಿ ಮಾನವ ಕೆಲವು ಹಂತಗಳನ್ನು ಅನಿವಾರ್ಯವಾಗಿ ಅನುಸರಿಸಬೇಕಾಗುತ್ತದೆ. ಇಂಥ ನಡೆಗೆ ವೈಜ್ಞಾನಿಕವಿಧಾನವೆಂದು (ನೋಡಿ- ವೈಜ್ಞಾನಿಕ-ವಿಧಾನ) ಹೆಸರು. ವಿಜ್ಞಾನದ ಇತಿಹಾಸವನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ: ಅಲ್ಲಿ ಶಾಶ್ವತ ಸತ್ಯ ಅಥವಾ ಪರಿಪೂರ್ಣ ಸಿದ್ಧಾಂತ ಎಂಬುದಿಲ್ಲ, ಪರಿಪೂರ್ಣತೆಯೆಡೆಗಿನ ನಡೆಯೊಂದೇ ಸತ್ಯ. ಆದ್ದರಿಂದಲೇ “ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ, ಇಂದು ನಂಬಿದುದೆ ಮುಂದೆಂದುಮೆಂದಲ್ಲ, ಕುಂದು ತೋರ್ದಂದದನು ತಿದ್ದಿಕೊಳೆ ಮನವುಂಟು, ಇಂದಿಗೀ ಮತವುಚಿತ ಮಂಕುತಿಮ್ಮ.”

ಭೌತವಿಶ್ವದ ರಹಸ್ಯ ತಿಳಿಯಲು, ತಿಳಿದು ಯುಕ್ತ ತಂತ್ರವಿದ್ಯೆ ರೂಪಿಸಲು ಮತ್ತು ತನ್ಮೂಲಕ ಜೀವನ ಸೌಕರ್ಯಗಳನ್ನು ಗಳಿಸಲು ಮಾನವನಿಗಿರುವ ಏಕೈಕ ವಿಶ್ವಾಸಾರ್ಹ ಸಂಗಾತಿಯೇ ವಿಜ್ಞಾನ. ತಂತ್ರವಿದ್ಯೆಯ ಅಪಾನ್ವಯದಿಂದ ಮನುಕುಲ ಮತ್ತು ಪರಿಸರಕ್ಕೆ ಹಾನಿ ಉಂಟಾಗುತ್ತಿರುವುದು ನಿಜ. ಆದರೆ ಇಲ್ಲಿಯ ಆರೋಪಿ ವಿಜ್ಞಾನ ಅಥವಾ ಅದರ ಶಿಶುವಾಗಿರುವ ತಂತ್ರವಿದ್ಯೆಯಲ್ಲ, ಅವುಗಳ ತಳದಲ್ಲಿರುವ ದುಷ್ಟ ಮತ್ತು ಅವಿವೇಕಿ ಮಾನವಮತಿ. ಆದ್ದರಿಂದ ಮತಿಸಂಸ್ಕಾರವೇ ಋಜುಶಿಕ್ಷಣದ ಗುರಿಯಾಗಿರತಕ್ಕದ್ದು. ಈ ದಿಶೆಯಲ್ಲಿ ಧರ್ಮದ (ರಿಲಿಜನ್) ಪಾತ್ರ ಅತಿ ಮುಖ್ಯ. ಮಾನವನಿಗೆ ಬದುಕಿನ ಗುರಿ ತೋರಬೇಕಾದದ್ದು ಧರ್ಮ, ಆ ಗುರಿಯೆಡೆಗಿನ ಹಾದಿಯನ್ನು ರೂಪಿಸಬೇಕಾದದ್ದು ವಿಜ್ಞಾನ. ಹೀಗೆ ಧರ್ಮ ಮತ್ತು ವಿಜ್ಞಾನ ಪರಸ್ಪರ ಪೂರಕ ಮತ್ತು ಪೋಷಕವಾಗಿರಬೇಕು. ಎಂದೇ ಐನ್‍ಸ್ಟೈನರ (1879-1955) ಈ ಸುಪ್ರಸಿದ್ಧ ಸೂಕ್ತಿ: “ಧರ್ಮರಹಿತ ವಿಜ್ಞಾನ ಕುಂಟು, ವಿಜ್ಞಾನ ರಹಿತ ಧರ್ಮ ಕುರುಡು.” ಧರ್ಮ ಮತ್ತು ವಿಜ್ಞಾನಗಳ ಸಮನ್ವಯವೇ ಸಂತೃಪ್ತ ಜೀವನದ ಸೂತ್ರ. (ನೋಡಿ- ವೈಜ್ಞಾನಿಕತೆ)	
(ಜಿ.ಟಿ.ನಾರಾಯಣರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ